ಪ್ರೀತಿಗಾಗಿ ಜೀವನ ಮರೆತ ಒಂಟಿ-ಬಂಟಿ ಕಥೆ- ರೇಟಿಂಗ್ : 3/5 ***
Posted date: 06 Sat, Jan 2024 10:28:47 AM
ಜೀವನದ ಎನ್ನುವುದು ನಮಗೆ ಸದಾ ಒಂದಿಲ್ಲೊಂದು ಪಾಠವನ್ನು ಕಲಿಸುತ್ತಲೇ ಇರುತ್ತದೆ. ಯಾವ ವಯಸಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಿದರೆ ಆ ಜೀವನ ನಿಜಕ್ಕೂ ಸುಖಮಯವಾಗಿರುತ್ತೆ ಅನ್ನೋ ಸಂದೇಶ ಹೇಳುವ ಚಿತ್ರ ಒಂಟಿ ಬಂಟಿ ಲವ್ ಸ್ಟೋರಿ ಈ ಶುಕ್ರವಾರ ತೆರೆಕಂಡಿದೆ, ಲೈಫಲ್ಲಿ ಯಾವುದು ಅತಿಮುಖ್ಯ ಎಂದರಿಯದೆ ಹುಚ್ಚು ಪ್ರೀತಿ, ಪ್ರೇಮದ ಹಿಂದೆ ಹೋದ ಒಂಟಿ ಹಾಗೂ ಬಂಟಿ ಎಂಬ ಸ್ನೇಹಿತರ ಕಥೆಯ ಜೊತೆ ಈಗಿನ ಕಾಲದ ಯುವಜನರ ಮಾನಸಿಕ ತೊಳಲಾಟವನ್ನೇ ಪ್ರಮುಖವಾಗಿಟ್ಟುಕೊಂಡು ನಿರ್ದೇಶಕ ಯತೀಶ್ ಪನ್ನಸಮುದ್ರ ಈ ಚಿತ್ರವನ್ನು ನಿರೂಪಿಸಿದ್ದಾರೆ.
 
ಓದಿ ವಿದ್ಯಾವಂತರಾಗಬೇಕಾದ  ಸಮಯದಲ್ಲಿ ಪ್ರೀತಿ  ಪ್ರೇಮ ಅಂತ ಹುಡುಗಿಯರ ಹಿಂದೆ ಹೇಗೋದು ಸರಿಯಲ್ಲ ಎಂಬುದನ್ನು  ಇಂದಿನ  ಯುವಕರ  ಮನಸ್ಥಿತಿಯನ್ನಾಧರಿಸಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ, ಯುವಜನರಲ್ಲಿ ಉದ್ಭವಿಸುವ ಇಂಥ  ಗೊಂದಲಗಳ ಜೊತೆ  ರೋಮ್ಯಾಂಟಿಕ್ ಕಾಮಿಡಿ ಕಥೆಯನ್ನು ಹೆಣೆದು ಯತೀಶ್ ಪನ್ನಸಮುದ್ರ ಈ ಸಿನಿಮಾ ಮಾಡಿದ್ದಾರೆ.  

ಒಂಟಿ, ಬಂಟಿ ಹಾಗೂ ಕಮಲಿ ಮೂವರೂ ಸ್ನೇಹಿತರು. ಒಂಟಿ ಮತ್ತು ಬಂಟಿ ಕಾಲೇಜು ಮುಗಿಸಿದರೂ ಕೆಲಸಕ್ಕೆ ಹುಡುಕಾಟ ನಡೆಸದೆ ಸದಾ ತುಂಟಾಟ ಮಾಡಿಕೊಂಡೇ ಲೈಫನ್ನು ತುಂಬಾ ಸುಲಭವಾಗಿ ತೆಗೆದುಕೊಂಡಿರುತ್ತಾರೆ, ಆದರೆ ಕಮಲಿ ಒಬ್ಬ ವೃತ್ತಿನಿರತ ಛಾಯಾಗ್ರಾಹಕನಾಗಿ  ಸ್ವಂತ ಸ್ಟುಡಿಯೋ ಮಾಡಿಕೊಂಡಿರುತ್ತಾನೆ. ಒಂಟಿ, ಬಂಟಿ  ಇಬ್ಬರ ಜೀವನದಲ್ಲಿ  ಸಿರಿ ಎಂಬ ಸುಂದರ ಯುವತಿಯ ಆಗಮನವಾದ ಮೇಲೆ ಕಥೆಗೆ ಹೊಸ ಟ್ವಿಸ್ಟ್ ಸಿಗುತ್ತದೆ, ಒಂಟಿ ಸಿರಿಯನ್ನು ಹೃದಯದಲ್ಲಿಟ್ಟುಕೊಂಡು ಪ್ರಾಮಾಣಿಕವಾಗಿ ಪ್ರೀತಿ ಮಾಡುತ್ತಾನೆ, ಆದರೆ ಅದಕ್ಕೂ ಮೊದಲೇ ಬಂಟಿ ಹಾಗೂ ಸಿರಿ ಒಬ್ಬರನ್ನೊಬ್ಬರು ಇಷ್ಟಪಟ್ಟಿರುತ್ತಾರೆ, ಅದನ್ನು ಸ್ನೇಹಿತನಿಗೆ ಹೇಳಿದರೆ ಎಲ್ಲಿ  ಆತ ಅನಾಹುತ ಮಾಡಿಕೊಳ್ಳುತ್ತಾನೋ ಎಂದು  ಸಿರಿಯ ವಿಷಯದಲ್ಲಿ ಆತನಿಗೆ ಸಿಟ್ಟು ಬರುವಂತೆ ಸಂದರ್ಭಗಳನ್ನು  ಸೃಷ್ಟಿಸುತ್ತಾ ಹೋಗ್ತಾನೆ, ಸಿರಿ ತನ್ನ ಲವ್ ರಿಜೆಕ್ಟ್ ಮಾಡಿದಮೇಲೆ ಒಂಟಿ ಆಕೆಯ ನೆನಪಲ್ಲೇ  ಇರುವಾಗ ಸಿರಿಯ ತಂದೆ ನಿನ್ನ ಸ್ನೇಹಿತನೇ ನಿನ್ನ ಪ್ರೀತಿಗೆ ಮುಳ್ಳಾಗಿದ್ದಾನೆ ಎಂದು ಹೇಳಿ ಅವರಿಬ್ಬರೂ ಜೊತೆಗಿರುವುದನ್ನು ತೋರಿಸುತ್ತಾನೆ. ಆಗ ಮತ್ತಷ್ಟು  ವಿಚಲಿತನಾದ ಒಂಟಿ, ಬಂಟಿಗೆ ಸಿರಿಯ ಬಗ್ಗೆ ನನ್ನಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದ್ದು ಇದಕ್ಕೆನಾ ಎಂದು ನಿಂದಿಸುತ್ತಾನೆ. ಆಗ ಸಿರಿಯೂ ಬಂಟಿಯ ನಡೆಗೆ ಬೇಸರಗೊಂಡು ಹೊರಟುಹೋಗುತ್ತಾಳೆ, ಇತ್ತ ಸಿರಿಯ ತಂದೆ ಮಗಳಿಗೆ ಬೆಂಗಳೂರಲ್ಲಿ  ಲಕ್ಷಾಂತರ  ಸಂಬಳ ಪಡೆಯುವ ಸಾಫ್ಟ್ವೇರ್ ಎಂಜಿನಿಯರ್ ಜೊತೆ ಮದುವೆ ನಿಶ್ಚಯ ಮಾಡುತ್ತಾನೆ, ಆತ ಬೇರಾರೂ  ಒಂಟಿ ಬಂಟಿ ಇಬ್ಬರಿಗೂ ಸ್ನೇಹಿತ. ಆತನನ್ನು ಪುಳಿಯೋಗರೆ ಎಂದೇ ಇವರು ಕರೀತರ‍್ತಾರೆ. 
 
ಮುಂದೆ ಒಂಟಿ ಬಂಟಿಯ ಪ್ರೇಮಕಥೆ ಯಾವ ರೀತಿ ಟರ್ನ್ ತಗೊಳ್ತು, ತಂದೆಯ ಆಗ್ರಹಕ್ಕೋಸ್ಕರ ಬೇರೊಬ್ಬನನ್ನು ಮದುವೆಯಾಗಲು ಹೊರಟ ಸಿರಿ ಏನಾದಳು ಇದನ್ನೆಲ್ಲ ತಿಳಿಯಬೇಕಾದರೆ ಥೇಟರಿಗೆ ಹೋಗಿ ಒಮ್ಮೆ ಈ ಸ್ನೇಹಿತರ ಕಥೆಯನ್ನು ನೋಡಿಕೊಂಡು ಬನ್ನಿ, ನಿರ್ದೇಶಕ ಕಮ್ ನಾಯಕ ಯತೀಶ್ ಪನ್ನಸಮುದ್ರ ಈಗಿನ ಯುವಕರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ಚಿತ್ರವನ್ನು ನಿರೂಪಿಸಿದ್ದಾರೆ, ನಾಯಕರಿಬ್ಬರೂ ಭಾವಪೂರ್ಣ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಇನ್ನು ನಾಯಕಿಯರಾದ  ಶ್ವೇತಾಭಟ್ ಮತ್ತು ಶ್ರುತಿ ಚಂದ್ರಶೇಖರ್ ಕೂಡ ಉತ್ತಮ ಅಭಿನಯ ನೀಡಿದ್ದಾರೆ,  ಶ್ರೀಹರಿ ಶ್ರೇಷ್ಠ ಅವರ ಸಂಗೀತ ಹಾಗೂ ಪ್ರಮೋದ್ ಮರವಂತೆ ಅವರ  ಸಾಹಿತ್ಯದ ೨ ಹಾಡುಗಳೂ ಕೇಳುವಂತಿವೆ. ಇನ್ನು ಶ್ರೀನಿವಾಸ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ ದಕ್ಷಿಣ ಕನ್ನಡದ ಸೊಬಗು ಕಣ್ಣಿಗೆ ತಂಪು ನೀಡುತ್ತದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed